ರಾಜೀವ ಗಾಂಧಿ
 	1941-91. ಭಾರತದ ಮಾಜಿ ಪ್ರಧಾನಿ. ಜವಾಹರಲಾಲನೆಹರೂ ಅವರ ಮೊಮ್ಮಗ. 1944 ಆಗಸ್ಟ್ 20ರಂದು ಮುಂಬಯಿಯಲ್ಲಿ ಜನಿಸಿದರು. ತಂದೆ ಫಿರೋಜ್ ಗಾಂಧಿ; ತಾಯಿ ಇಂದಿರಾಗಾಂಧಿ. ಫಿರೋಜ್ ಗಾಂಧಿ ಅತ್ಯುತ್ತಮ ಸಂಸದೀಯಪಟು ಎಂದೇ ಹೆಸರು ಪಡೆದಿದ್ದರು. ಲೋಕಸಭೆಯಲ್ಲಿ ಅವರು ನಡೆಸುತ್ತಿದ್ದ ವಾಗ್ವಾದಗಳು ನೆಹರೂ ಅರವರನ್ನೂ ದಿಗ್ಭ್ರಮೆಗೊಳಿಸುತ್ತಿದ್ದುವು.

	ಜವಾಹರಲಾಲ ನೆಹರೂ ಪ್ರಧಾನಿಯಾದಾಗ (1947) ರಾಜೀವ್ ಅಲಹಾಬಾದ್‍ನಿಂದ ನವದೆಹಲಿಗೆ ಬಂದರು. ಇವರು ಬೆಳೆದದ್ದು ಡೆನಿಷ್ ಮಹಿಳೆಯೊಬ್ಬಳ ಆರೈಕೆಯಲ್ಲಿ. ಇವರ ಬಾಲ್ಯ ಕಳೆದದ್ದು ತಾಯಿ ಇಂದಿರಾ, ತಾತ ಜವಾಹರಲಾಲರೊಂದಿಗೆ ನವದೆಹಲಿಯ ತೀನ್‍ಮೂರ್ತಿ ಭವನದಲ್ಲಿ. ರಾಜೀವ್ ಅವರ ಪ್ರಾರಂಭದ ವಿದ್ಯಾಭ್ಯಾಸ ದೆಹಲಿಯ ಕೊಲಂಬಸ್ ಶಾಲೆಯಲ್ಲಿ ನಡೆಯಿತು. ಅನಂತರ ಡೆಹರಾಡೂನಿನಲ್ಲಿ ಡೂನ್ ಸ್ಕೂಲಿನ ವಿದ್ಯಾರ್ಥಿಯಾದರು. ಅಲ್ಲಿಂದ ಹೊರಬಂದಿದ್ದು 1960ರಲ್ಲಿ. ಬಳಿಕ ಉನ್ನತ ಶಿಕ್ಷಣಕ್ಕಾಗಿ ಕೇಂಬ್ರಿಜ್‍ನ ಟ್ರಿನಿಟಿ ಸ್ಕೂಲ್ ಸೇರಿದರು. ಅನಂತರ ಲಂಡನ್‍ನ ಇಂಪೀರಿಯಲ್ ಕಾಲೇಜಿಗೆ ಪ್ರವೇಶ ಪಡೆದು ಇಲ್ಲಿ ಮೆಕಾನಿಕಲ್ ಎಂಜಿನಿಯರಿಂಗ್‍ನಲ್ಲಿ ಅಧ್ಯಯನ ನಡೆಸಿದರು. ಬಾಲ್ಯದಿಂದಲೂ ಇವರಿಗೆ ತಾನೊಬ್ಬ ವಿಮಾನ ಚಾಲಕನಾಗಬೇಕೆಂಬ ಹಂಬಲ ಇತ್ತು.

	ರಾಜೀವರದು ಬಲು ಆಕರ್ಷಕ ವ್ಯಕ್ತಿತ್ವ. ಲಂಡನ್ನಿನಲ್ಲಿ ಇದ್ದಾಗ ಅಲ್ಲಿ ಇಂಗ್ಲಿಷ್ ಕಲಿಯಲು ಬಂದ ಇಟಲಿಯ ತರುಣಿ ಸೋನಿಯಾ ಮೈನೋ ಎಂಬುವರನ್ನು ಮೋಹಿಸಿದರು. ಅನಂತರ 1968ರಲ್ಲಿ ಇವರೀರ್ವರ ವಿವಾಹ ಜರುಗಿತು. ಇಂಗ್ಲೆಂಡಿನಲ್ಲಿದ್ದಾಗ ಬೀಟಲ್‍ಗಳಾಗಲಿ, ವಾಮಪಂಥದ ವಿಚಾರ ಪ್ರಣಾಳಿಕೆಗಳಾಗಲಿ ರಾಜಕಾರಣವಾಗಲಿ ಇವರನ್ನು ಆಕರ್ಷಿಸಲಿಲ್ಲ. ಭಾರತದ ಸಮಸ್ಯೆಗಳನ್ನು ಕುರಿತಂತೆ ಚರ್ಚಿಸುವುದು ಇವರ ಹವ್ಯಾಸವಾಗಿತ್ತು. ಪಾಶ್ಚಾತ್ಯ ಸಂಗೀತ ಮತ್ತು ಭಾರತೀಯ ಶಾಸ್ತ್ರೀಯ ಸಂಗೀತ ಇವರಿಗೆ ಪ್ರಿಯವಾಗಿತ್ತು. ವಿಜ್ಞಾನ, ತಂತ್ರಜ್ಞಾನಗಳನ್ನು ಕುರಿತಂತೆ ಬೃಹತ್ ಸಂಪುಟಗಳು ಇವರ ಗ್ರಂಥಾಲಯದಲ್ಲಿದ್ದುವು. ಇವರ ಹವ್ಯಾಸಗಳ ಪೈಕಿ ಛಾಯಾಚಿತ್ರ ಕಲೆಯೂ ಒಂದಾಗಿತ್ತು. 

	ಗ್ಲೈಡಿಂಗ್‍ನಲ್ಲಿ ತರಬೇತಿ ಪಡೆದುಕೊಂಡ ರಾಜೀವ್ ದೆಹಲಿಗೆ ಮರಳಿ ಬಳಿಕ ಸಫ್‍ದರಜಂಗ್ ಫ್ಲೈಯಿಂಗ್ ಕ್ಲಬ್ಬಿನ ಸದಸ್ಯರಾದರು. ಅನಂತರ ವಿಮಾನಚಾಲನೆಯನ್ನೇ ತಮ್ಮ ವೃತ್ತಿಯನ್ನಾಗಿಸಿಕೊಂಡರು. ಇವರು ಇಂಡಿಯನ್ ಏರ್‍ಲೈನ್ಸ್ ಸಂಸ್ಥೆ ಸೇರಿದ್ದು 1968ರಲ್ಲಿ. ಏಳು ತಿಂಗಳ ಬಳಿಕ ಡಕೋಟ ವಿಮಾನದ ಚಾಲಕರಾದರು. ಈ ಹುದ್ದೆಯಲ್ಲಿ ಇವರು 14 ವರ್ಷಗಳ ತನಕ ಸೇವೆ ಸಲ್ಲಿಸಿದರು.

	ಇವರು ರಾಜಕೀಯ ಪ್ರವೇಶಿಸಿದ್ದು ಒಂದು ಆಕಸ್ಮಿಕ ಘಟನೆ. ಕಿರಿಯ ಸಹೋದರ ಸಂಜಯ್‍ಗಾಂಧಿ ವಿಮಾನ ಅಪಘಾತವೊಂದರಲ್ಲಿ ಅಸುನೀಗಿದಾಗಿ (23 ಜೂನ್ 1980) ತಾಯಿ ಇಂದಿರಾಗೆ ನೆರವಾಗುವುದು ಅನಿವಾರ್ಯವೆನಿಸಿತು. 1981 ಮೇ 11ರಂದು ಇಂದಿರಾ ಕಾಂಗ್ರೆಸ್ಸಿನ ಸದಸ್ಯರಾಗಿ ರಾಜಕೀಯವನ್ನು ಪ್ರವೇಶಿಸಿದರು. ಅದೇ ವರ್ಷ ಸಹೋದರ ಸಂಜಯ್ ಪ್ರತಿನಿಧಿಸುತ್ತಿದ್ದ ಅಮೇಥಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಲೋಕಸಭೆಗೆ ಸ್ಪರ್ಧಿಸಿದರು. ಜನತೆಯ ಸ್ನೇಹ ಸಂಪಾದಿಸಲು ಮತ್ತು ಅವರ ಸಮಸ್ಯೆಗಳನ್ನು ಅರಿತುಕೊಳ್ಳಲು ಚುನಾವಣೆಗೆ ಸ್ಪರ್ಧಿಸಿರುವುದಾಗಿ ಘೋಷಿಸಿದರು. ರಾಜೀವ್ ಬಹುಬೇಗನೆ ಜನಸಾಮಾನ್ಯರ ನೆಚ್ಚಿನ ನಾಯಕರಾದರು. ಅಮೇಥಿ ಚುನಾವಣೆ ಇವರಿಗೆ ಜಯ ತಂದುಕೊಟ್ಟಿತು. ಅನಂತರ ಇವರು ಯುವ ಕಾಂಗ್ರೆಸ್ಸಿನ ಕಾರ್ಯಕಾರಿ ಸಮಿತಿಯ ಸದಸ್ಯರಾದರು. ನವದೆಹಲಿಯಲ್ಲಿ 1981ರ ಜನವರಿಯಲ್ಲಿ ಜರುಗಿದ ಬೃಹತ್ ಕಿಸಾನ್ ರ್ಯಾಲಿಯ ರೂವಾರಿಯಾದರು. 1982ರಲ್ಲಿ ಭಾರತ ಏಷ್ಯನ್ ಕ್ರೀಡೆಗಳನ್ನು ನಡೆಸುವ ಆತಿಥೇಯ ರಾಷ್ಟ್ರವಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಯಾವುದೇ ಕೆಲಸಕಾರ್ಯಗಳು ಸಮರ್ಪಕವಾಗಿ ನಡೆದಿರಲಿಲ್ಲ. ಕ್ರೀಡಾಂಗಣ, ವಸತಿ ಸಮುಚ್ಚಯಗಳ ನಿರ್ಮಾಣ ಮೊದಲಾದ ಕೆಲಸಕಾರ್ಯಗಳ ಮೇಲ್ವಿಚಾರಣೆಯ ಸಮಸ್ತ ಹೊಣೆಯನ್ನು ಇವರಿಗೆ ವಹಿಸಲಾಯಿತು. ಏಷ್ಯನ್ ಕ್ರೀಡೆಗಳು ಅತ್ಯಂತ ಯಶಸ್ವಿಯಾಗಿ ಕೊನೆಗೊಂಡವು. ಅನಂತರ ಇವರನ್ನು ಕಾಂಗ್ರೆಸ್ಸಿನ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಯಿತು. 1983ರಲ್ಲಿ ಫೆಬ್ರವರಿ 2ರಂದು ಕಲ್ಕತ್ತದಲ್ಲಿ ಜರುಗಿದ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಸಭೆಯಲ್ಲಿ `ರಾಜೀವ್ ಭವಿಷ್ಯದ ರಾಷ್ಟ್ರನಾಯಕ ಎಂಬುದು ಸ್ಪಷ್ಟವಾಯಿತು. ಪಕ್ಷದ ಪ್ರತಿನಿಧಿಯಾಗಿ ಇವರು ಭಾರತದ ಅನೇಕ ರಾಜ್ಯಗಳಲ್ಲಿ ಹಾಗೂ ವಿದೇಶಗಳಲ್ಲಿ ವ್ಯಾಪಕವಾಗಿ ಪ್ರವಾಸ ಕೈಗೊಂಡರು. ಅಂದಿನ ಪ್ರಧಾನಿ ಇಂದಿರಾಗಾಂಧಿಯವರ ನಿವಾಸದ ಪಕ್ಕದಲ್ಲೇ ತಮ್ಮ ಕಾರ್ಯಾಲಯ ಆರಂಭಿಸಿದರು. ದೇಶದ ನಾನಾ ಭಾಗಗಳಿಂದ ಬರುತ್ತಿದ್ದ ಜನರ ನಾನಾ ಸಮಸ್ಯೆಗಳನ್ನು ಸಹನೆಯಿಂದ ಕೇಳಿ, ಟಿಪ್ಪಣಿ ಮಾಡಿಕೊಂಡು ಯುಕ್ತ ಪರಿಹಾರವನ್ನು ಹುಡುಕುವ ವ್ಯವಸ್ಥೆಯನ್ನು ಮಾಡುತ್ತಿದ್ದರು. 1984ರಲ್ಲಿ ರಾಜ್ಯಸಭೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆಯ ಹೊಣೆಯನ್ನು ಇವರಿಗೆ ವಹಿಸಲಾಯಿತು.

	1984ರಂದು ಅಕ್ಟೋಬರ್ 31ರಂದು ಇಂದಿರಾಗಾಂಧಿಯವರ ಹತ್ಯೆ ನಡೆದಾಗ ರಾಜೀವ್ ಪ್ರಧಾನಮಂತ್ರಿಯಾಗಿ ತಮ್ಮ 40ನೆಯ ವಯಸ್ಸಿನಲ್ಲಿ ಅಧಿಕಾರ ಸ್ವೀಕರಿಸಿದರು. ಪ್ರಧಾನಿಯಾಗಿ ನೇಮಕಗೊಂಡ ಅತ್ಯಂತ ಕಿರಿಯ ವ್ಯಕ್ತಿ ಎಂಬ ಹೇಳಿಕೆಗೆ ಪಾತ್ರರಾದರು. ಅವರ ತಾಯಿ ಇಂದಿರಾಗಾಂಧಿ ಪ್ರಧಾನಿಯಾದದ್ದು ತಮ್ಮ 48ನೆಯ ವಯಸ್ಸಿನಲ್ಲಿ. 17ವರ್ಷ ಸತತ ಪ್ರಧಾನಿಯಾಗಿದ್ದ ಅವರ ತಾತ ಜವಹರಲಾಲ್ ನೆಹರೂ ದೇಶದ ಮೊಟ್ಟಮೊದಲ ಪ್ರಧಾನಿಯಾದಾಗ ಅವರಿಗೆ 58 ವರ್ಷ ವಯಸ್ಸು. ಇಂದಿರಾ ಗಾಂಧಿಯವರ ಹತ್ಯೆಯಿಂದ ದೇಶಾದ್ಯಂತ ಹಿಂಸೆ ಭುಗಿಲೆದ್ದಿತು. ಸಿಖ್ ಸಮುದಾಯದ ಮೇಲೆ ಜನ ರೊಚ್ಚಿಗೆದ್ದಿದ್ದರು. ಮತೀಯ ಸೌಹಾರ್ದತೆ ಕಾಪಾಡಿಕೊಂಡು ಬರುವಂತೆ ರಾಜೀವ್ ಜನರಿಗೆ ಕರೆ ನೀಡಿದರು. ಬಹುಬೇಗನೆ ಶಾಂತಿ ಸ್ಥಾಪಿಸುವಲ್ಲಿ ರಾಜೀವ್ ಯಶಸ್ವಿಯಾದರು. ಇವರು ಅಧಿಕಾರ ವಹಿಸಿಕೊಂಡಾಗ ಇವರಿಗೆ ಇದ್ದುದು ಕೇವಲ ನಾಲ್ಕು ವರ್ಷಗಳ ರಾಜಕೀಯ ಅನುಭವ. ಆದರೆ ಬಹು ಬೇಗನೆ ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರದ ಮೇಲೆ ಹಿಡಿತ ಸಾಧಿಸಿಕೊಂಡ ಸಾಮಥ್ರ್ಯ ಇವರದು. ಅಧಿಕಾರಕ್ಕೆ ಬಂದಾಗ ಕಾಶ್ಮೀರ, ಅಸ್ಸಾಂ, ಪಂಜಾಬ್ ಮತ್ತು ಶ್ರೀಲಂಕಾಗಳ ಸಮಸ್ಯೆಯ ಜೊತೆಗೆ ಏರುತ್ತಿರುವ ಬೆಲೆ, ಜನಸಂಖ್ಯಾ ಹೆಚ್ಚಳ, ನಿರುದ್ಯೋಗ ಮೊದಲಾದ ಸಮಸ್ಯೆಗಳನ್ನೂ ರಾಜೀವ್ ಎದುರಿಸಬೇಕಾಯಿತು. ಇದಲ್ಲದೆ ಕಪ್ಪುಹಣ, ಭ್ರಷ್ಟಾಚಾರ ಇವುಗಳಿಂದ ಜನತೆಯ ನೈತಿಕ ಸ್ಥೈರ್ಯ ಕುಸಿದಿತ್ತು. ಇವೆಲ್ಲವನ್ನೂ ಇವರು ತಮಗೆ ಎದುರು ಬಂದ ರಾಷ್ಟ್ರೀಯ ಸವಾಲೆಂದು ಧೈರ್ಯದಿಂದ ಸ್ವೀಕರಿಸಿದರು. 

	1984ರಲ್ಲಿ ಡಿಸೆಂಬರ್‍ನಲ್ಲಿ ಲೋಕಸಭೆಗೆ ಚುನಾವಣೆ ಘೋಷಿಸಿದರು. ಕಾಂಗ್ರೆಸ್ ಪಕ್ಷ ಇವರ ನಾಯಕತ್ವದಲ್ಲಿ ಎಂಟನೆಯ ಲೋಕಸಭೆಗೆ ನಾಲ್ಕನೆಯ ಮೂರಷ್ಟು ಪ್ರಚಂಡ ಬಹುಮತ ಗಳಿಸಿತು. ಎನ್.ಟಿ. ರಾಮಾರಾವ್ ರಚಿಸಿದ ತೆಲಗುದೇಶಂ ಪ್ರಾದೇಶಿಕ ಪಕ್ಷವೇ ವಿರೋಧ ಪಕ್ಷದ ಸ್ಥಾನ ಗಳಿಸಿತು. ಉಳಿದ ರಾಷ್ಟ್ರೀಯ ಪಕ್ಷಗಳೆಲ್ಲ ನೆಲಕಚ್ಚಿದವು. ಕಾಂಗ್ರೆಸ್ ಪಕ್ಷ 371 ಸ್ಥಾನ ಗಳಿಸಿತ್ತು. 1984 ಡಿಸೆಂಬರ್ 31ರಂದು ರಾಜೀವ್ ನಾಯಕತ್ವದ ಹೊಸ ಸರ್ಕಾರ ಅಧಿಕಾರ ವಹಿಸಿಕೊಂಡಿತು. ಇವರ ಸರ್ಕಾದಲ್ಲಿ ಅನುಭವಿಗಳೂ ಪರಿಣಿತರೂ ಇದ್ದರು. ಭಾರತದೊಂದಿಗೆ ಸಂಬಂಧ ಸುಧಾರಿಸಲು ಪಾಕಿಸ್ತಾನ, ಶ್ರೀಲಂಕಾ, ಅಮೆರಿಕಗಳಿಗೆ ಪತ್ರ ಬರೆದರು. ಗಂಗಾನದಿಯ ಶುದ್ಧೀಕರಣ, ಅರಣ್ಯೀಕರಣಕ್ಕಾಗಿ ವ್ಯಾಪಕ ಯೋಜನೆ, ದುರ್ಬಲ ವರ್ಗದವರಿಗೆ ಇನ್ನಷ್ಟು ನೆರವು. ಆಡಳಿತದಲ್ಲಿ ಸುಧಾರಣೆ ಮೊದಲಾದ ಕಾರ್ಯಕ್ರಮಗಳು ಆದ್ಯತೆ ಪಡೆದವು. ಭಾರತವನ್ನು 21ನೆಯ ಶತಮಾನಕ್ಕೆ ಅಣಿಗೊಳಿಸುವ ನಿಟ್ಟಿನಲ್ಲಿ ತಾಂತ್ರಿಕ ಮತ್ತು ವೈಜ್ಞಾನಿಕ ಪ್ರಗತಿಗೆ ಇವರು ಒತ್ತುಕೊಟ್ಟರು. ಶ್ರೀಲಂಕಾ ಒಪ್ಪಂದದೊಂದಿಗೆ, ಆಫ್ಘಾನಿಸ್ಥಾನದ ಬಿಕ್ಕಟ್ಟಿಗೆ ಪರಿಹಾರ ಕಂಡು ಹಿಡಿಯಲು ಪ್ರಯತ್ನಿಸಿದರು. ಅಲಿಪ್ತನೀತಿಗೆ ಮರುಜೀವ ನೀಡಿದರು. ರಷ್ಯದ ಗೊರ್ಬೆಚೋವ್ ಅಮೆರಿಕದ ರೊನಾಲ್ಡ್ ರೇಗನ್ನರೊಂದಿಗೆ ಸ್ನೇಹ ಸಂಪಾದಿಸಿದರು. ಬ್ರಿಟಿಷ್ ಆಡಳಿತದಲ್ಲಿ ದಕ್ಷಿಣ ಆಫ್ರಿಕದ ಮೇಲೆ ಆರ್ಥಿಕ ದಿಗ್ಭಂಧನ ಹೇರುವಲ್ಲಿ ಕಾಮನ್‍ವೆಲ್ತನಲ್ಲಿ ಹೋರಾಟ ನಡೆಸಿದರು. ಇದಲ್ಲದೆ ದಕ್ಷಿಣ ಆಫ್ರಿಕದ ಕಪ್ಪುಜನರ ಹೋರಟಕ್ಕೆ ಬೆಂಬಲ ಸೂಚಿಸಿದರು.

	ಭಾರತ, ಮಾಲ್ಡೀವ್ಸ್, ಪಾಕಿಸ್ತಾನ ಬಾಂಗ್ಲಾದೇಶ, ಶ್ರೀಲಂಕಾ, ಭೂತಾನ ಮತ್ತು ನೇಪಾಲಗಳನ್ನೊಳಗೊಂಡ ದಕ್ಷಿಣ ಏಷ್ಯ ಪ್ರಾದೇಶಿಕ ಸಹಕಾರಿ ಸಂಘವನ್ನು (ಸೌತ್ ಏಷ್ಯನ್ ಅಸೋಸಿಯೇಷನ್ ಫಾರ್ ರೀಜನಲ್ ಕೊ ಆಪ್‍ರೇಷನ್-ಸಾರ್ಕ್) ಡಿಸೆಂಬರ್ 1985ರಲ್ಲಿ ಸಂಘಟಿಸಿದರು. ಇವರ ಅಧಿಕಾರವಧಿಯಲ್ಲಿ ಬೋಫೋರ್ಸ್ ಫಿರಂಗಿ ಹಗರಣ ಇವರಿಗೆ ಕಳಂಕ ತಂದಿತು. 1989ರಲ್ಲಿ ನಡೆದ ಚುನಾವಣೆಯಲ್ಲಿ ಇವರ ಪಕ್ಷಕ್ಕೆ ಸೋಲಾಯಿತು. ಅನಂತರ ಕಾಂಗ್ರೆಸ್ಸೇತರ ಸರ್ಕಾರ ಅಧಿಕಾರಕ್ಕೆ ಬಂತು. 18 ತಿಂಗಳ ಬಳಿಕ ಪುನಃ ಚುನಾವಣೆ ಘೋಷಣೆಯಾಯಿತು. ಕಾಂಗ್ರೆಸ್ ಪಕ್ಷವನ್ನು ಪುನಃ ಅಧಿಕಾರಕ್ಕೆ ತರಲು ರಾಜೀವ್ ವ್ಯಾಪಕವಾಗಿ ಚುನಾವಣಾ ಪ್ರಚಾರ ಕೈಗೊಂಡರು. ಸ್ಥಿರ ಸರ್ಕಾರ ರಚನೆಗೆ ತಮ್ಮ ಪಕ್ಷವನ್ನು ಬೆಂಬಲಿಸಬೇಕೆಂದು ಕೋರಿದರು. ಹೀಗೆ ಚುನಾವಣಾ ಪ್ರಚಾರ ಕೈಗೊಂಡಾಗ ತಮಿಳುನಾಡಿನ ಮದ್ರಾಸಿನಿಂದ (ಚೆನ್ನೈ) 40 ಕಿ.ಮೀ. ದೂರದಲ್ಲಿರುವ ಶ್ರೀಪೆರಂಬುದೂರಿನಲ್ಲಿ 1991 ಮೇ 21ರಂದು ಎಲ್‍ಟಿಟಿಇ ಉಗ್ರಗಾಮಿಗಳಿಂದ ಹತ್ಯೆಗೀಡಾದರು. 

	ರಾಜೀವ್ ಗಾಂಧಿಯವರಲ್ಲಿ ಹಿಡಿದ ಕೆಲಸವನ್ನು ಸಾಧಿಸುವ ಛಲವಿತ್ತು. ಶ್ರೀಲಂಕಾದಲ್ಲಿ ತಮಿಳರ ಸಮಸ್ಯೆ ಬಗೆಹರಿಸಲು ಶಾಂತಿ ಸೇನೆಯ ರವಾನೆ, ಪಂಜಾಬಿನ ಬಿಕ್ಕಟ್ಟಿಗೆ ಪರಿಹಾರ ಸೂಚಿಸಲು ಲೋಂಗೋವಾಲಾ ಜೊತೆ ಒಪ್ಪಂದ, ಅಸ್ಸಾಂ ಒಪ್ಪಂದ, ಪಕ್ಷಾಂತರ ನಿಷೇಧ ಕಾನೂನು, ಜನತೆಗೆ ಉದ್ಯೋಗ ಒದಗಿಸುವ ಜವಾಹರ್ ರೋಜ್‍ಗಾರ್ ಯೋಜನೆ-ಇವು ಇವರ ಆಡಳಿತದ ಸಾಧನೆಗಳು. ಇವರಿಗೆ ಪ್ರಿಯಾಂಕ ಮತ್ತು ರಾಹುಲ್ ಇಬ್ಬರು ಮಕ್ಕಳು. ಪತ್ನಿ ಸೋನಿಯಾ ಗಾಂಧಿ ಈಗ (1998) ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದಾರೆ. ಈಗ ಯುಪಿಎ ಮೈತ್ರಿಕೂಟದ ಅಧ್ಯಕ್ಷರು. ಕಾಂಗ್ರೆಸ್‍ನ್ನು ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ತಂದ ಕೀರ್ತಿ ಅವರಿಗೆ. ಜತೆಗೆ ಪ್ರಧಾನಿ ಹುದ್ದೆಯನ್ನು ನಿರಾಕರಿಸಿ, ಮನಮೋಹನಸಿಂಗ್ ಅವರನ್ನು ಪ್ರಧಾನಿ ಮಾಡಿದ ಹೆಗ್ಗಳಿಕೆಗೆ ಸೋನಿಯಾಗಾಂಧಿ ಪಾತ್ರರು. 

	ಭಾರತ ಸರ್ಕಾರ 1991ರಲ್ಲಿ ರಾಜೀವರಿಗೆ ಮರಣೋತ್ತರವಾಗಿ `ಭಾರತರತ್ನ ಪ್ರಶಸ್ತಿ ನೀಡಿ ಗೌರವಿಸಿದೆ. 

     (ಎಚ್.ಎಸ್.ಕೆ.; ಕೆ.ಎಸ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ